ಶನಿವಾರ, ಮಾರ್ಚ್ 7, 2009

ಪೀಠಿಕೆ -- ಇದು ಏನು, ಯಾರಿಗೆ ಮತ್ತು ಯಾಕೆ ?

ನಮಸ್ಕಾರ,

ಈ ಪುಟವನ್ನು ಓದುವುದಕ್ಕೆ ಬಂದ ನಿಮಗೆ ಸ್ವಾಗತ ಹಾಗೂ ಧನ್ಯವಾದಗಳು.

ನಮಗೆಲ್ಲಾ ಗೊತ್ತಿದ್ದಂತೆ ಹಿಂದೂ ಧರ್ಮ ಬಹಳ ಪುರಾತನವಾದುದು. ನಮ್ಮ ಈ ಧರ್ಮದ ಅಡಿಪಾಯ ವೇದಗಳು. ನಮ್ಮ ಧರ್ಮದಲ್ಲಿ ಎಷ್ಟೋ ಪಂಗಡಗಳಿದ್ದರೂ, ಆ ಪಂಗಡಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಇಟ್ಟುಕೊಂಡಿದ್ದರೂ ಅವೆಲ್ಲಾದಕ್ಕೂ ಮೂಲ ವೇದಗಳು ಎಂಬುದು ನನ್ನ ಭಾವನೆ. ಹಿಂದೂಗಳಾಂದತಹ ನಾವು, ಅಥವಾ ವೇದದಲ್ಲಿ ವಿಶ್ವಾಸ - ಗೌರವ ಇರುವ ಯಾವುದೇ ವ್ಯಕ್ತಿಯು ವೇದಗಳಲ್ಲಿ ಉಲ್ಲೇಖಿಸಿರುವ ಆದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಶ್ರೇಯಸ್ಕರ. ಕೇವಲ ದೇವರ ಸ್ತುತಿ ಮಾತ್ರವಲ್ಲದೇ ವೇದಗಳು ನಮ್ಮ ಸಾಮಾಜಿಕ ಜೀವನನದ ಮೇಲೂ ಬೆಳಕು ಚೆಲ್ಲುತ್ತವೆ. ಆದರೆ, ಆನಾದಿ ಕಾಲದಿಂದಲೂ ಇರುವ ಈ ವೇದದ ತಿಳುವಳಿಕೆ ಹಾಗೂ ಅದರ ಪಾಲನೆ ದಿನಗಳೆದಂತೆ ನಿಶ್ಶಕ್ತವಾಗುತ್ತಿದೆ. ಜನರ ಆಲಸ್ಯದಿಂದಲೋ ಅಥವಾ ಅಜ್ಞಾನದಿಂದಲೋ ವೇದಗಳ ಪಠನ, ಅವುಗಳ ಪಾಲನೆ ಕಡಿಮೆಯಾಗುತ್ತಾ ಬಂದಿದೆ. ಎಷ್ಟೋ ಕಡೇ ಅನುಸರಣೆ ಇದ್ದರೂ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸರಿಯಾಗಿ ಆದರೂ ಆಚರಣೆಗಳ ಕಾರಣ ಅಥವಾ ಮಹತ್ವ ಗೊತ್ತಿಲ್ಲ. ದಿನಗಳೆದಂತೆ ವೇದಗಳ ಮಹತ್ವ ಕಡಿಮೆಯಾಗುತ್ತಿದೆ ಹಾಗೂ ಅವುಗಳ ಆಚರಣೆಗಳಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿದ್ದು ಸರಿಯಾದ ಕ್ರಮ ಯಾವುದೆಂದು ತಿಳಿಯದೇ ಅವರವರ ಭಾವನೆಗೆ ತಕ್ಕಂತೆ ಆಚರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈಗಿನ ಆಧುನಿಕ ಜೀವನ ಶೈಲಿ ಹಬ್ಬಗಳ ಆಚರಣೆಗಳನ್ನೂ ಕ್ರಮೇಣವಾಗಿ ದೂರ ಮಾಡುತ್ತಿದೆ. ಕೆಲಸಕ್ಕಾಗಿಯೋ, ಕಲಿಯುವುದಕ್ಕಾಗಿಯೋ ಮತ್ತಿನ್ಯಾವುದೋ ಕಾರಣದಿಂದಲೋ ದೂರದೇಶಕ್ಕೇ ಹೋಗಿ, ಮನೆಯ ಹಿರಿಯರಿಂದ ದೂರವಾಗಿರುವಂತಹ ನವ ಪೀಳಿಗೆಗೆ ಹಿರಿಯರಿಂದ ಕಲಿಯಬೇಕಾದಂತಹ ಎಷ್ಟೋ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಗೊತ್ತೇ ಆಗುವುದಿಲ್ಲ. ಹಾಗಾಗಿ ಆ ವಿಚಾರಗಳ ಹಸ್ತಾಂತರ ಆಗುತ್ತಿಲ್ಲ. ನಾನೂ ಸಹ ಇಂತಹ ಹೊಸ ಪೀಳಿಗೆಗೆ ಸೇರಿದವನು. ಆದರೆ ನಮ್ಮೆಲ್ಲಿರಗೂ ಈ ವಿಚಾರಗಳು ತಿಳಿದಿರಬೇಕು, ನಾವೂ ಸಹ ಅವುಗಳನ್ನು ಪಾಲಿಸಬೇಕು ಅನ್ನುವ ಅಭಿಪ್ರಾಯ ನನ್ನದು.

ನಮ್ಮ ಪೀಳಿಗೆಯ ಇನ್ನೊಂದು ವಿಶೇಷತೆ ಏನೆಂದರೇ, ನಾವು ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತೇವೆ. ಮಾಡಲು ಹೇಳಿದ ಕೆಲಸವನ್ನು ಇದೇ ರೀತಿ ಯಾಕೆ ಮಾಡಬೇಕು ಅಂತ ಕೇಳುತ್ತೇವೆ. ಸರಿಯಾಗಿ ಅರಿಯದೇ, ಮನಃಪೂರ್ವಕವಾಗಿ ಆ ಕೆಲಸವನ್ನು ಮಾಡಲು ನಾವು ಒಪ್ಪುವುದಿಲ್ಲ. ಯಾರಾದರೂ ಧರ್ಮದ ಬಗ್ಗೆ ಯಾವುದೇ ವಿಷಯವನ್ನು ಹೇಳಿದರೆ ಅದನ್ನು ಒಪ್ಪದೇ ಪ್ರಶ್ನಿಸುತ್ತೇವೆ. ಆದರೇ ನಮ್ಮ ಸನಾತನ ಹಿಂದೂ ಧರ್ಮ ಒಂದು ದಿನದಲ್ಲಿ ತಿಳಿಯುವಷ್ಟು ಸರಳವಾದುದಲ್ಲ. ಜೀವನದ ಪ್ರತಿಯೊಂದು ಕಾರ್ಯಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳಿವೆ. ಅವುಗಳೆಲ್ಲದರ ಅಧ್ಯಯನಕ್ಕೆ ಹತ್ತಾರು ವರ್ಷಗಳೇ ಬೇಕು. ಉತ್ತರ ಬೇಕೆನ್ನುವ ನಾವು ಅಷ್ಟು ಕಾಲ ಅವುಗಳ ಅಧ್ಯಯನಕ್ಕೆ ಮೀಸಲಿಡುವುದು ಕಷ್ಟ. ಆದರೆ ಉತ್ತರಗಳು ಬೇಕು - ಈ ಪರಿಸ್ಥಿತಿಗೇ ಪರಿಹಾರ ತರಬೇಕೆಂದೇ ನಾನು ಈ ಬ್ಲಾಗ್ (Blog) ಬರೆಯಲು ನಿರ್ಧರಿಸಿದೆ.

ಅದರೇ ಮೊದಲೇ ಹೇಳಿದಂತೆ ಈ ವಿಚಾರಗಳಲ್ಲಿ ನನ್ನ ಜ್ಞಾನವೂ ಅಷ್ಟಕಷ್ಟೇ. ಯಾವುದೇ ಸತ್ಕಾರ್ಯಕ್ಕೇ ದೇವರ ಅನುಗ್ರಹ ಇದ್ದೇ ಇರುತ್ತೇ ಅನ್ನುವ ಮಾತಿಗೆ ಸಾಕ್ಷಿಯಾಗಿ ನನಗೆ ಈ ಬ್ಲಾಗ್ ವಿಚಾರ ಬಂದಾಗ, ಶ್ರೀ ದೇವರ ಕೃಪೆಯಿಂದ ಸುಧಾ ಪಂಡಿತರಾದ, ಧಾರವಾಡ ನಗರದ ಶ್ರೀ || ಶ್ರೀಕಾಂತಾಚಾರ್ಯ ಬಿದರಕುಂದಿಯವರ ಪರಿಚಯವಾಯಿತು. ಧರ್ಮಜ್ಞಾನಿಗಳಾದ ಇವರಿಗೆ ನನ್ನ ವಿಚಾರವನ್ನು ತಿಳಿಸಿದೆ. ಅವರಿಗೂ ಇದು ಸರಿಯಾದ ವಿಚಾರವೆಂದನಿಸಿ, ಆಗಲಿ ಎಂದು ಆಶೀರ್ವದಿಸಿದರು. ಈಗ ಈ ಬ್ಲಾಗಿನಲ್ಲಿ ಬರೆಯಲು ನನಗೆ ಬೇಕಾದ ಮಾಹಿತಿಯನ್ನು ಶ್ರೀಯುತರು ಒದಗಿಸಿಕೊಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾ ಈ ಬ್ಲಾಗ್ ಜನರಿಗೆ ಉಪಯುಕ್ತವಾಗಲಿ, ಜನರು ಇದನ್ನು ಓದಿ ಹೆಚ್ಚು ಧಾರ್ಮಿಕರಾಗಲಿ ಎಂದು ಆಶೀರ್ವದಿಸಲು ಕೋರುತ್ತೇನೆ.

ಇನ್ನು ಈ ಬ್ಲಾಗಿನಲ್ಲಿ ಏನೇನು ಬರೆಯುತ್ತೇನೆ ಅನ್ನುವುದರ ಬಗ್ಗೇ ಒಂದು ಚಿಕ್ಕ ಪರಿಚಯ :

೧) ಮೊಟ್ಟ ಮೊದಲಿಗೆ ಹಿಂದೂ ಪಂಚಾಂಗದ ಪ್ರಕಾರ ಬರುವ ಹಬ್ಬಗಳು, ಅವುಗಳ ಆಚರಣೆ ಮತ್ತು ಆ ಆಚರಣೆಯ ಹಿಂದಿರುವ ಉದ್ದೇಶ.
ಈ ಮಾಹಿತಿಯನ್ನ ಕೆಳಗಿನ ವಿಭಾಗಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇನೇ -
 • ಮಾಸಪಕ್ಷ – ತಿಥಿ
 • ದಿನದ ಮಹತ್ವಶಾಸ್ತ್ರದ ಯಾವ ಭಾಗದಲ್ಲಿ (ಅಂದರೇ ಪುರಾಣದಲ್ಲೋ, ಉಪನಿಷತ್ತಿನಲ್ಲೋ, ಇತ್ಯಾದಿ) ಇದರ ಉಲ್ಲೇಖ ಇದೆ ಮತ್ತು ಯಾಕೆ ಮಾಡಬೇಕೆಂದು ಅಲ್ಲಿ ಹೇಳಿದ್ದಾರೆ.
 • ಹಬ್ಬವನ್ನ ಯಾವ ರೀತಿ ಆಚರಿಸಬೇಕು, ಯಾವ ರೀತಿ ಆಚರಿಸಬಾರದು (ಈಗಿರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು)
 • ಹಾಗೂ ಪ್ರತಿ ಆಚರಣೆಯ ಪದ್ಧತಿಗೂ ಕಾರಣ ಹಾಗೂ ಮಹತ್ವ.
ಇವುಗಳ ಜೊತೆ ಇನ್ನೂ ಏನಾದರು ಸೇರಿಸಬಹುದು ಎಂದನಿಸಿದರೆ ನಮಗೆ ತಿಳಿಸಿ. ಸಾಧ್ಯವಾದಷ್ಟು ಮಾಹಿತಿಯನ್ನು ಇಲ್ಲಿ ಕೊಡಲು ಪ್ರಯತ್ನಿಸುತ್ತೇವೆ.

೨) ಹಬ್ಬಗಳ ಜೊತೆ ನಮ್ಮ ದಿನನಿತ್ಯದ ಕಾರ್ಯಗಳನ್ನಾಗಲಿ, ಅಥವಾ ಕೆಲವು ವಿಶೇಷ ಕಾರ್ಯಗಳನ್ನಾಗಲಿ ಹೇಗೇ ಮಾಡಬೇಕು ಅಂತ ವೇದಗಳ ಅಂಗವಾದ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಜೋತಿಷ್ಯ ಶಾಸ್ತ್ರದ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ನಾನಾ ವಿಧವಾದ ವಿಚಾರಗಳಿವೆ. ಆದರೆ ಅದು ನಿಜಕ್ಕೂ ವೇದದ ಒಂದು ಅಂಗ, ಅದಕ್ಕೆ ಅರ್ಥವಿದೆ ಮತ್ತು ಅದರಲ್ಲಿ ಹೇಳಿರುವ ವಿಚಾರಗಳು ಸರಿ ಎಂದು ನನಗನಿಸಿ ಅದನ್ನು ಇಲ್ಲಿ ಸೇರಿಸುತ್ತಿದ್ದೇನೆ. ಜೋತಿಷ್ಯ ಅಂದರೆ ನಾನಿಲ್ಲಿ ಯಾರ ಭವಿಷ್ಯ ಹೇಳುವುದಿಲ್ಲ, ರಾಶಿ ನಕ್ಷತ್ರ ನೋಡಿ ಫಲ ಹೇಳೋದಿಲ್ಲ. ಇಲ್ಲಿ ವರ್ಷದ ಒಂದು ಮಾಸದ ಈ ದಿನ ಯಾವ ಕಾರ್ಯಕ್ಕೇ ಶುಭ, ಯಾವುದಕ್ಕೆ ಅಶುಭ ಎಂಬ ವಿಚಾರವನ್ನು ತಿಳಿಸಲಾಗುತ್ತದೆ. ಇದರೊಂದಿಗೆ ಮತ್ತಿತರ ಅಗತ್ಯ ಮಾಹಿತಿಗಳನ್ನು ಪ್ರಕಟಿಸುತ್ತೇನೆ.

ನಿಮಗೆ ನಿಮ್ಮ ರಾಶಿ, ನಕ್ಷತ್ರಗಳ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಕುಂಡಲಿ, ಜಾತಕ, ಫಲ, ಕಷ್ಟ ಪರಿಹಾರದಂತಹ ವಿಶಯಗಳಲ್ಲಿ ಸಹಾಯ ಬೇಕಾದಲ್ಲಿ ಜೋತಿರ್ಜ್ಞಾನಿಗಳಾದ ಶ್ರೀ ಶ್ರೀಕಾಂತಾಚಾರ ಬಿದರಕುಂದಿ, ಧಾರವಾಡ ಇವರನ್ನು ಸಂಪರ್ಕಿಸಬಹುದು. ಇವರ ಸಂಪರ್ಕ ವಿವರಗಳು ಇದೇ ಪುಟದ ಪ್ರಾರಂಭದಲ್ಲಿವೆ.

ಈ ಎಲ್ಲಾ ಮಾಹಿತಿಯನ್ನು ಮಾಸ-ಪಕ್ಷ-ತಿಥಿ ಪ್ರಕಾರವಾಗಿ ಪ್ರಕಟ ಮಾಡಲಾಗುತ್ತದೇ. ಹಾಗಾಗಿ ಬರುವ ಯುಗಾದಿ, ಅಂದರೇ ಬರುವ ಚೈತ್ರ ಮಾಸದ, ಶುಕ್ಲ ಪಕ್ಷದ, ಪ್ರಥಮ ದಿನವಾದ ಪ್ರತಿಪದ ದಿನದಿಂದ ಆರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಆಂಗ್ಲ ಕ್ಯಾಲೆಂಡರ್ (English Calendar) ಪ್ರಕಾರ ಯುಗಾದಿ ಇದೇ ತಿಂಗಳು March-27 ರಂದು ಇದೆ. ಅದಕ್ಕಿಂತ ಕನಿಷ್ಠ ಪಕ್ಷ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿಯೇ ಚೈತ್ರ ಮಾಸದ ಮಾಹಿತಿಯನ್ನು ಪ್ರಕಟ ಮಾಡುತ್ತೇವೆ. ಸಾಧ್ಯವಾದಲ್ಲಿ ಅದಕ್ಕಿಂತ ಬೇಗನೇ ಒದಗಿಸಲು ಪ್ರಯತ್ನಿಸುತ್ತೇವೆ. ಮುಂದುವರೆದಂತೆ ಕ್ರಮೇಣ ಒಂದೊಂದಾಗಿ ಎಲ್ಲಾ ಮಾಸಗಳ ವಿವರಗಳನ್ನು ಪ್ರಕಟಿಸುತ್ತೇವೆ.

ಮತ್ತೆ ಮತ್ತೆ ಈ ಪುಟವನ್ನು ಓದಲು ಬನ್ನಿ, ಹೊಸ ವಿಚಾರಗಳನ್ನ ತಿಳಿಯಿರಿ ಇತರರಿಗೆ ತಿಳಿಸಿ, ನಿಮ್ಮ ಅಭಿಪ್ರಾಯವನ್ನೂ ಬರೆಯಿರಿ.

ಅದೆಲ್ಲದರ ಜೊತೆ ಬರುವ ಹೊಸ ವರ್ಷದಿಂದ, ಅಂದರೇ ಯುಗಾದಿಯಿಂದ ಇಲ್ಲಿರುವ ವಿಷಯಗಳನ್ನ ಓದಿ, ನಿಮಗೇ ಸಮಂಜಸವೆನಸಿದಲ್ಲಿ ಅದನ್ನು ಪಾಲಿಸಿ ಇನ್ನು ಧಾರ್ಮಿಕರಾಗಿ.

ಓದುಗರಲ್ಲಿ ನಮ್ಮ ಕೋರಿಕೆ : ಈ ಬ್ಲಾಗಿನ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಮತ್ತು ಇತರ ಪರಿಚಯದವರಿಗೆ ತಿಳಿಸಿ, ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮೊಡನೆ ಸಹಕರಿಸಬೇಕಾಗಿ ವಿನಂತಿ.

6 ಕಾಮೆಂಟ್‌ಗಳು:

 1. ಆತ್ಮೀಯ ಶ್ರೀರಂಗ ,

  ಭಾರತೀಯ ಸಂಸ್ಕೃತಿ ಮತ್ತು ಜೀವನ ಮೌಲ್ಯ ಗಳ ಬಗ್ಗೆ ನಿಮ್ಮ ಕಳಕಳಿ ಪ್ರಶಂಸನೀಯ . ಇದರ ಬಗ್ಗೆ ಜನಜಾಗೃತಿ ಮೂಡಿಸಿವಲ್ಲಿನ ನಿಮ್ಮ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಶುಭ ಹಾರೈಕೆ . ನಾನು ಇದರ ಪೂರ್ಣಕಾಲಿಕ ಓದುಗನಾಗುವುದಷ್ಟೇ ಅಲ್ಲದೆ ನನ್ನ ಮಿತ್ರ ವೃಂದದಲ್ಲೂ ಎಲ್ಲರಿಗೂ ತಿಳಿಸುತ್ತೇನೆ . ಹಾಗೂ ನನಗೆ ಯಾವುದೇ ಮಾಹಿತಿ ಬೇಕಾದಲ್ಲಿ ಅದು ತಮ್ಮಿಂದ ದೊರಕುವುದೆಂದು ಭಾವಿಸುತ್ತೇನೆ . ಹಾಗೂ ನಾನು ನಿಮ್ಮ ಈ ಬ್ಲಾಗಿನ ಪೂರ್ಣ ಸದುಪಯೋಗ ಪಡೆದುಕೊಳ್ಳುತ್ತೇನೆ .

  ನೀವು ಹೇಳಿದಂತೆ ಯುವ ಪೀಳಿಗೆಯಲ್ಲಿ ( ನಾನೂ ಸೇರಿದಂತೆ ) ಹಿಂದೂ ಆಚರಣೆಗಳ ಬಗ್ಗೆ ಅರಿವು ಇಲ್ಲದಿರುವುದು ನಿಜಕ್ಕೂ ಖೇದಕರ . ಹಬ್ಬವೆಂದರೆ ಶಾಲಾ -ಕಾಲೇಜುಗಳಿಗೆ ರಜಾ ಎಂದಷ್ಟೇ ತಿಳಿದಿರುವ ಇವರಲ್ಲಿ ಈ ನಿಟ್ಟಿನಲ್ಲಿ ಅರಿವು ಮೂಡಿಸುವುದು ನಿಜಕ್ಕೂ ಅಗತ್ಯ .

  ತಮ್ಮ ಈ ಶುಭಕಾರ್ಯಕ್ಕೆ ಸಕಲ ಸನ್ಮಂಗಳ ಪ್ರಾಪ್ತಿಯಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ .

  ನಿಮ್ಮವ
  ಸುಮಂತ ಶ್ಯಾನುಭಾಗ್ ವಡೇರಹೋಬಳಿ

  ಪ್ರತ್ಯುತ್ತರಅಳಿಸಿ
 2. I am not sure how practical it is have this post in English, it would definitely help people like me who cant read their mother tongue fluently :P
  I would really like to follow this blog, inability to read kannada quickly is a big inhibition.
  Does it go against whole ideology of having this blog in the first place ?
  I hope not... This knowledge and awareness should transcend languages.

  ಪ್ರತ್ಯುತ್ತರಅಳಿಸಿ
 3. ರಂಗ,
  ನಿನ್ನ ಈ ಹೊಸ ಪ್ರಯತ್ನಕ್ಕೆ ಶುಭಾಶಯಗಳು. ಈ ಬ್ಲಾಗ್ ಕೇವಲ ಪಂಚಾಂಗ ಹಾಗೂ ಹಬ್ಬ ಹರಿದಿನಗಳ ಆಚರಣೆಗಷ್ಟೇ ಸೀಮಿತವೇ? ಹಿಂದೂ ಧರ್ಮ ಒಂದು ಜೀವನ ಶೈಲಿ, ಇದು ಬಹಳ ಒಳ ಪದರಗಳನ್ನು ಹೊಂದಿದ್ದು ಬಹಳ ಕ್ಲಿಷ್ಟಕರ ವಿಷಯಗಳನ್ನೊಳಗೊಂಡಿದೆ. ನೀನು ಈ ಸನಾತನ ಧರ್ಮದ ವೈಜ್ಞಾನಿಕ ಎಳೆಯನ್ನು ಬಿಡಿಸುವತ್ತ ಶ್ರಮಿಸಿದರೆ ಶ್ಲಾಘನೀಯ
  -ತಿಲಕ್

  ಪ್ರತ್ಯುತ್ತರಅಳಿಸಿ
 4. If we do not respect our past, the future will not respect. Hence this is good beginning.

  ಪ್ರತ್ಯುತ್ತರಅಳಿಸಿ
 5. ಅದ್ಭುತ ಪ್ರಯತ್ನ,
  ಶುಭಾಶಯಗಳು

  ranga sir,
  I learnt in recent times that there are a group of people in jayathirtha mutt , Basavangudi who calculate and write the panchanga. i Hope they could help us in resolving conflicts.I ll try to get their contact numbers if possible.

  ಪ್ರತ್ಯುತ್ತರಅಳಿಸಿ
 6. ಎಲ್ಲ ಓದುಗರಿಗೂ ಧನ್ಯವಾದಗಳು.

  @Ravi Math
  We totally agree with you and if you have read the second post we now have this same blog translated into English. Thanks to my friend Rajath.

  @ತಿಲಕ್
  ನೀವು ಹೇಳುವುದು ನೂರಕ್ಕೇ ನೂರು ಸತ್ಯ. ಆದರೆ ನಮ್ಮ ಈ ವಿಶಾಲವಾದ ಸನಾತನ ಧರ್ಮದ ಆಳವನ್ನು ಮುಟ್ಟುವ ಪ್ರಯತ್ನಕ್ಕಿಂತ ಮುಂಚೆ ಸ್ವಲ್ಪ ಸರಳವಾದ, ಎಲರಿಗೂ ಪಾಲಿಸಲು ಸಾಧ್ಯವಿರುವಂತಹ ಹಬ್ಬಗಳು ಹಾಗು ಇತರ ಮಹತ್ವದ ದಿನಗಳ ಆಚರಣೆಗಳನ್ನು ಕಲಿತುಕೊಳ್ಳೋಣ ಅನ್ನುವ ವಿಚಾರ ನನ್ನದು.

  ಇದನ್ನು ಕಲಿತು, ಸ್ವಲ್ಪ ಮಟ್ಟಿಗೆ ಆದ್ರು ಧಾರ್ಮಿಕರಾದರೇ ಮುಂದಿನ ದಾರಿಯನ್ನು ಕಾಣುವುದಕ್ಕಾಗಲಿ, ಆ ದಾರಿಯಲ್ಲಿ ಪ್ರಯಾಣ ಮಾಡುವುದಕ್ಕಾಗಿ ಇಂತಹ ಬ್ಲಾಗಿನ ಅವಶ್ಯಕತೆ ಇರುವುದಿಲ್ಲಾ, ಹೊರಗಡೆ ಸಿಗುವ ಅನೇಕಾನೇಕ ಪುಸ್ತಕಗಳು ಸಾಕು ಅನ್ನುವುದು ನನ್ನ ಅಭಿಪ್ರಾಯ.

  ಮೊದಲು ಹಬ್ಬಗಳ ವಿಚಾರಗಳನ್ನು ಸಂಗ್ರಹಿಸೋಣ. ಈ ಬ್ಲಾಗ್ ಯಶಸ್ವಿಯಾದರೇ ಮುಂದೆ ನೀವು ಹೇಳಿದ ವಿಚಾರಗಳಿಗಾಗಿ ಇನ್ನೊಂದು ಬ್ಲಾಗ್ ಆರಂಭಿಸಿದರಾಯ್ತು.

  ಪ್ರತ್ಯುತ್ತರಅಳಿಸಿ