ಭಾನುವಾರ, ಮೇ 31, 2009

ಮಣ್ಣೆತ್ತಿನ ಅಮವಾಸ್ಯ

ಮಣ್ಣೆತ್ತಿನ ಅಮವಾಸ್ಯ

ಜೈಷ್ಠ -- ಅಮವಾಸ್ಯ

ಈ ದಿನ ಮಣ್ಣಿನಿಂದ ಎರಡು ಎತ್ತುಗಳನ್ನು ಮಾಡಿ ವಿಧವಿತ್ತಾಗಿ ಪೂಜಿಸಬೇಕು. ವರ್ಷದಲ್ಲಿ ೫ ಬಾರಿ ಮೃತ್ತಿಕಾ ಪೂಜೆಯನ್ನು ಮಾಡುವುದಾಗಿ ಶಾಸ್ತ್ರವು ನಮಗೆ ಆಜ್ಞೆ ಮಾಡಿದೆ. ಅದರಲ್ಲಿ ಇದು ಒಂದು. ಈ ದಿನ ಮಣ್ಣಿನ ಎತ್ತು ಮಾಡಿ, ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು.

ಇದರ ಬಗ್ಗೆ ಈ ಒಂದು ಲೇಖನವಿದೆ -- http://sampada.net/blog/brahmana/12/09/2008/11695

ಮಳೆಗಾಲದ ಪ್ರಾರಂಭ

ಮಳೆಗಾಲದ ಪ್ರಾರಂಭ

ಜೈಷ್ಠ - ಕೃಷ್ಣ - ಪ್ರತಿಪದ

ಇವತ್ತು ಮೃಗಶಿರಾ ಪ್ರವೇಶವಾಗುತ್ತದೆ. ಇವತ್ತಿನಿಂದ ಮಳೆಗಾಲದ ಕೆಲಸಗಳನ್ನು ಪ್ರಾರಂಭಿಸಬಹುದು. ಶಾಸ್ತ್ರದಲ್ಲಿರುವ ಇದರ ವಿವರಗಳು ಮತ್ತು ವೈಜ್ಞಾನಿಕವಾಗಿ ಅದಕ್ಕಿರುವ ಅರ್ಥವನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸುತ್ತೇವೆ.

ವಟ ಸಾವಿತ್ರಿ ವ್ರತ

ವಟ ಸಾವಿತ್ರಿ ವ್ರತ

ಜೈಷ್ಠ -- ಹುಣ್ಣಿಮೆ

ಈ ವ್ರತವು ಸೌಮಾಂಗಲ್ಯದಾಯಕ, ಸಂತಾನದಾಯಕ ಮತ್ತು ವಿವಾಹದಾಯಕವಾಗಿದೆ. ಈ ವ್ರತವನ್ನು ಮೂರು ದಿನಗಳಲ್ಲಿ ಆಚರಿಸುವುದಕ್ಕೆ ಹೇಳಿದ್ದಾರೆ. ಒಂದು ದಿನವಾದರೂ ಆಚರಿಸಲೇಬೇಕು. ಇದರ ವಿವರಗಳನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ದಶಹರಾ ವ್ರತ ಮತ್ತು ಭಾಗಿರಥಿ ಜಯಂತಿ

ದಶಹರಾ ವ್ರತ

ಜೈಷ್ಠ -- ಶುಕ್ಲ -- ದಶಮಿ

ಈ ದಿನ, ಮಂಗಶವಾರ, ಹಸ್ತಾ ನಕ್ಷತ್ರದಲ್ಲಿ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದಳು. ಈ ದಿನ ವ್ಯತಿಪಾತ ಯೋಗ, ಗಜಕರಣ ಆನಂದಕರಣ, ಕನ್ಯಾರಾಶಿಯಲ್ಲಿ ಚಂದ್ರ ಹಾಗು ವೃಷಭ ರಾಶಿಯಲ್ಲಿ ರವಿ ಇರುವರು. ಇವೆಲ್ಲಾ ಸೇರಿ ಮಹಾ ಯೋಗ ಸಂಭವಿಸುತ್ತದೆ. ಹತ್ತು ವಿಧವಾದ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ನದಿಸ್ನಾನ, ತಿಲತರ್ಪಣ, ಗಂಗಾ ಪೂಜಾದಿಗಳನ್ನು ಮಾಡಬೇಕು. ಹತ್ತು ವಿಧವಾದ ಪಾಪಗಳಲ್ಲಿ ಮೂರು ರೀತಿಯ ಪಾಪಗಳು --

೧. ಕಾಯಿಕ -- ಅಂದರೆ ದೇಹದಿಂದ ಸಂಭವಿಸಬಹುದಾದ ಪಾಪ. ಇದರಲ್ಲಿ, ಒಬ್ಬ ತಾನು ಪರರಿಗೆ ಏನನ್ನು ಕೊಡದೆ ಕೇವಲ ಅವರಿಂದ ಸ್ವೀಕಾರ ಮಾಡುವುದು. ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸೇವನ ಮಾಡುವುದು, ಈ ರೀತಿಯಾದ ಮೂರು ಪಾಪಗಳು ಬರುತ್ತವೆ.
೨. ವಾಚಕ -- ಅಂದರೆ ಮಾತಿನಿಂದ ಆಗುವ ಪಾಪ. ಕ್ರೂರವಾಗಿ ನುಡಿಯುವುದು, ಸುಳ್ಳು ಹೇಳಿವುದು, ಚಾಡೀ ಹೇಳುವುದು.ಅಸಂಬಂಧವಾಗಿ ಮಾತನಾಡುವುದು, ಈ ನಾಲ್ಕು ವಾಚಕ ಪಾಪಗಳು.
೩. ಮಾನಸಿಕ -- ಅಂದರೆ ವಿಚಾರದಿಂದಾಗುವ ಪಾಪ. ಪರರ ಸಂಪತ್ತನ್ನು ಅಪಹಾರ ಮಾಡುವುದರಲ್ಲಿ ಮನಸ್ಸು ಮಾಡುವುದು, ಮನಸ್ಸಿನಲ್ಲಿಯೆ ಅನ್ಯರಿಗೆ ಕೆಟ್ಟು ಬಯಸುವುದು, ವ್ಯರ್ಥವಾಗಿ ಮನಸ್ಸಿನ ಆವೇಶ ಹೊಂದುವುದು -- ಈ ಮೂರು ಮಾನಸಿಕ ಪಾಪಗಳು.

ಈ ರೀತಿಯಾಗಿ ದಶವಿಧ ಪಾಪಗಳಿವೆ. ಆ ಪಾಪಗಳು ನಷ್ಠವಾಗುವುದಕ್ಕೆ ದಶಹರಾವನ್ನು ಆಚರಿಸಬೇಕು. ಹಿಂದಿನ ಹತ್ತು ಜನ್ಮಗಳಲ್ಲಿ ಸಂಗ್ರಹವಾದ ಬ್ರಹ್ಮ ಹತ್ಯೆಗೆ ಸಮಾನವಾದ ಪಾಪಗಳು ಸ್ನಾನ ಮಾತ್ರದಿಂದಲೇ ನಾಶವಾಗುವುದರಿಂದ ಕೂಡ ಇದನ್ನು ದಶಹರಾ ಎಂದು ಕರೆಯಲಾಗಿದೆ.

ಭಾಗಿರಥಿ ಜಯಂತಿ

ಜೈಷ್ಠ -- ಶುಕ್ಲ -- ದಶಮಿ

ದೇವತೆಗಳ ಲೋಕದಲ್ಲಿ ಸಂಚರಿಸುವ ಸ್ವರ್ಧುನಿಯಾದ ಗಂಗಾದೇವಿಯು ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಬಂದ ದಿನ. ಭಗೀರಥ ತನ್ನ ಪೂರ್ವಿಕರ ಉದ್ಧಾರವಾಗಬೇಕೆಂದು ಸತತ ಪ್ರಯತ್ನ ಮಾಡಿ ಅವಳನ್ನು ಭೂಮಿಗೆ ಕರೆತಂದ ದಿವಸವೇ ಭಾಗೀರಥಿ ಜಯಂತಿ. ಗಂಗೆಯು ಭಗೀರಥನ ಪ್ರಾರ್ಥನೆಯಂತೆ ಪ್ರತಿಪದೆಯ ದಿನ ಭೂಮಿಯಲ್ಲಿ ಪ್ರಕಳಾಗಿ, ದಶಮೆಯ ದಿನ ಪ್ರವಾಹ ರೂಪವನ್ನು ಧರಿಸಿದಳು. ಆದ್ದರಿಂದ ಪ್ರತಿಪದಾದಿಂದ ದಶಮಿಯವರೆಗಿನ ದಿನಗಳು ಅತ್ಯಂತ ಶುದ್ಧವಾದ ದಿನಗಳು.

ಜೈಷ್ಠ ಮಾಸ

ಜೈಷ್ಠ ಮಾಸ

ಜೈಷ್ಠ ಮಾಸದ ಹೆಸರಿನಿಂದಲೇ ಅದರ ಶ್ರೇಷ್ಠತೆಯನ್ನು ತಿಳಿದು ಬರುತ್ತದೆ. ಈ ಮಾಸದಲ್ಲಿ ಮೊಸರು ಅನ್ನ ದಾನಕ್ಕೆ ಬಹಳ ಮಹತ್ವವನ್ನು ಹೇಳಿದ್ದಾರೆ. ಈ ಮಾಸದ ಮಹತ್ವ ಭಗೀರಥನ ಕಥೆಯಲ್ಲಿ ಬರುತ್ತದೆ. ಶಿವನು ಭಗೀರಥನಿಗೆ ಈ ರೀತಿಯಾಗಿ ಆಜ್ಞೆ ಮಾಡಿದನು --

"ಜೈಷ್ಠಮಾಸದಲ್ಲಿ ನಿತ್ಯ ಪ್ರಾತಃ ಕಾಲದಲ್ಲಿ ಎದ್ದು ಪ್ರಾಕರ್ವಿಧಿಗಳನ್ನು ಮುಗಿಸಿದ ನಂತರ ವಿಧಿಪೂರ್ವಕವಾಗಿ ಸ್ನಾನ ಮಾಡಬೇಕು. ಆಮೇಲೆ ತ್ರಿವಿಕ್ರಮ ರೂಪಿಯಾದ ಪರಮಾತ್ಮನ ಪೂಜೆಯನ್ನು ಮಾಡಬೇಕು. ಅನಂತರ ಹೇರಾಜಾ ಯೋಗ್ಯರಾದ ಬ್ರಾಹ್ಮಣರಿಗೆ ಮೊಸರು ಅನ್ನವನ್ನು ಹಾಗು ನೀರನ್ನು ದಾನವಾಗಿ ಕೊಡಬೇಕು. ಈ ಪ್ರಕಾರ ಒಂದು ತಿಂಗಳು ಪರ್ಯಂತ ನೀನು ಭಕ್ತಿಯಿಂದ ಆಚರಿಸಿದರೆ ಶ್ರೀ ಹರಿಯು ಪ್ರಸನ್ನನಾಗಿ, ಸರ್ವ ಪಾಪಗಳನ್ನು ಕಳೆಯಲು ಸಮರ್ಥಳಾದ ಗಂಗೆಯನ್ನು ಭೂಮಿಗೆ ಕರೆದು ತರುವನು." ಈ ಪ್ರಕಾರ ಶಿವನು ತಿಳಿಸಿದಂತೆ ಭಗೀರಥ ರಾಜನು ವ್ರತವನ್ನು ಆಚರಿಸಿದನು. ಆ ವ್ರತಾಚಾರಣೆ ಮಾತ್ರದಿಂದ ವಿಷ್ಣುವು ಪ್ರಸನ್ನನಾಗಿ ರಾಜನಿಗೆ ಪ್ರತ್ಯಕ್ಷನಾದನು, ಗಂಗಾವತಾರಣ ಮಾಡುವುದಾಗಿ ಅವನಿಗೆ ವರವನ್ನು ಕೊಟ್ಟನು. ಈ ರೀತಿಯಾಗಿ ಭವಿಷ್ಯ ಪುರಾಣದಲ್ಲಿ ಬಂದ ಜೈಷ್ಠ ಮಾಸದ ಮಹತ್ಮೆಯಲ್ಲಿ ವರ್ಣನೆ ಮಾಡಿದ್ದಾರೆ. ಈ ಮಾಸವು ಗಂಗಾವತಾರಕ್ಕೆ ಕಾರಣಿಭೂತವಾದ ಮಾಸ ಎಂಬುದಾಗಿ ನಾವು ತಿಳಿಯಬೇಕು. ಈ ಒಂದು ಮಹಾಕಾರ್ಯದಿಂದ ಎಷ್ಟೋ ಸಾತ್ವಿಕರ ಉದ್ಧಾರವಾಗಿದೆ, ಆಗುತ್ತಲೇ ಇದೆ.

ವಿಷ್ಣುರ್ವೈ ಸರ್ವದೇವಾನಾಂ ಜೈಷ್ಠಃ ಶ್ರೇಷ್ಠಃ ಪ್ರಜಾಪತಿಃ |
ತಥಾಯಂ ಸರ್ವಮಾಸಾನಾಂ ಜೈಷ್ಠ ಶ್ರೇಷ್ಠ ತಮಸ್ಮೃತಃ ||

ಎಲ್ಲ ದೇವತೆಗಳಲ್ಲಿ ವಿಷ್ಣುವು ಉತ್ತಮನಾಗಿರುವಂತೆ ಈ ಜೈಷ್ಠ ಮಾಸವು ಉಳಿದೆಲ್ಲ ಮಾಸಗಳಿಗಿಂತ ಶ್ರೇಷ್ಠವಾಗಿದೆ.

ಶನೈಶ್ವರ ಜಯಂತಿ

ಶನೈಶ್ವರ ಜಯಂತಿ

ವೈಶಾಖ -- ಅಮವಾಸ್ಯ - ಕೃತ್ತಿಕಾ ನಕ್ಷತ್ರ - ಅತಿಗಂಡಯೋಗ

ಒಂಬತ್ತು ಗ್ರಹಗಳಲ್ಲಿ ಒಬ್ಬ ಶನಿ. ಇವನ ಪರಿಚಯ ಬಹಳ ಏನು ಬೇಕಾಗಿಲ್ಲಾ. ಪ್ರಾಯ ಮನುಷ್ಯ ತನ್ನ ಜೀವನದಲ್ಲಿ ಶನಿಯ ಅನುಗ್ರಹ ಹಾಗೂ ನಿಗ್ರಹಗಳಿಗೆ ಪಾತ್ರನಾಗಿರುವುದು ಸಹಜ. ಶನಿ ಏನನ್ನು ಮಾಡಬಲ್ಲ. ಬಹಳ ಶ್ರೀಮಂತನಾಗಿದ್ದರೆ ಅವರಿಂದ ದುಷ್ಟ ಕಾರ್ಯಗಳನ್ನು ಮಾಡಿಸಿ ಅವರಿಗೆ ಅಧೋಗತಿ ತರಬಹುದು, ಆರೋಗ್ಯದಲ್ಲಿ ವ್ಯತ್ಯಾಸ ಮಾಡಬಹುದು. ಆಕಸ್ಮಿಕವಾಗಿ ಮರಣವು ಬರಬದುದು. ಎಲ್ಲ ಗ್ರಹಗಳಿಗಿಂತ ನಮಗೆ ಫಲಾಫಲಗಳನ್ನು ನೆನಪಿಡುವಂತೆ ಮಾಡುವವನು ಶನೈಶ್ವರ. ಇವನು ರಾಶಿಗಳಲ್ಲಿ ಮಕರ, ಕುಂಭಗಳಿಗೆ ಅಧಿಪತಿಯಾಗಿದ್ದಾನೆ. ಇವನ ನಾಮಕರಣ ಮಾಡಿದ್ದು ಇವನ ಚಲನವನ್ನನುಸರಿಸಿ. ಶನೈ ಚರತಿ ಇತಿ ಶನೈಶ್ವರಃ -- ಸಂಸ್ಕೃತದಲ್ಲಿ ಶನೈ ಎಂದರೆ ನಿಧಾನ ಎಂದರ್ಥ. ಇವನು ಚಲಿಸುವ ವಿಧಾನವು ನಿಧಾನ. ಇವನು ಒಂದು ರಾಷಿಯಲ್ಲಿ ೨-೧/೨ (ಎರಡೂ ವರೆ) ವರ್ಷ ಇರುತ್ತಾನೆ. ಅಲ್ಲದೆ ಅವನಿದ್ದ ರಾಶಿಗಿಂತ ಹಿಂದಿನ ರಾಶಿ ಹಾಗು ಮುಂದಿನ ರಾಶಿಯನ್ನು ಇದ್ದ ರಾಶಿಯಿಂದಲೇ ಪ್ರೇಕ್ಷಿಸುತ್ತಾನೆ. ಆದ್ದರಿಂದ ಶನಿಯ ಫಲ ೭ (ಏಳು) ವರ್ಷ ಇರುತ್ತವೆ. ಇವನು ರವಿ-ಛಾಯಾದೇವಿಯ ಮಗನಾಗಿ, ದಕ್ಷ ಪ್ರಜಾಪತಿಯ ಮೊಮ್ಮಗನಾಗಿ ಹುಟ್ಟಿದ. ಇವನು ನರಸಿಂಹ ದೇವರ ಪರಮಭಕ್ತ ಹಾಗೂ ಅವರ ಸ್ತೋತ್ರವನ್ನೂ ಮಾಡಿದ್ದಾನೆ. ನರಸಿಂಹ ದೇವರ ಭಕ್ತರನ್ನು ಹಾಗು ಆಂಜನೇಯ ಸ್ವಾಮಿಯ ಭಕ್ತರನ್ನು ಇವನು ಯಾವ ಕಷ್ಟಕ್ಕೂ ಗುರಿಪಡಿಸುವುದಿಲ್ಲಾ ಎಂದು ಹೇಳಿದ್ದಾನೆ. ನರಸಿಂದ ಸ್ತೋತ್ರದಲ್ಲಿ ಈ ರೀತಿ ಹೇಳಿದ್ದಾನೆ --- "ಯಾರು ಸ್ನಾನ ಸಂಧ್ಯಾವಂದನೆ, ದಾನ, ತೀರ್ಥ ಕ್ಷೇತ್ರಗಳ ಸಂದರ್ಸನ, ಸಜ್ಜನರ ಸಂಗ, ನಿರಂತರ ನಿನ್ನ ನಾಮಸ್ಮರಣೆ ಮಾಡುವವರೋ, ನಾನು ಅವರನ್ನು ಕಾಡುವುದಿಲ್ಲಾ. ಯಾರು ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಾರೆಯೋ ಅವರನ್ನು ಸಂಪೂರ್ಣ ಕೆಳಗೆ ಹಾಕುತ್ತೇನೆಠ ಎಂದು ಹೇಳಿದ್ದಾನೆ. ಇದಕ್ಕೆ ಸ್ವಾಮಿ ನರಸಿಂಹ ದೇವರು ಅನುಮತಿ ಕೊಟ್ಚಿದ್ದಾರೆ. ಅದಕ್ಕಾಗಿ ಜಪ-ತಪ-ದಾನ-ಧರ್ಮಗಳನ್ನು ಮಾಡಬೇಕು. ಇದರಲ್ಲಿ ಆಲಸ್ಯವನ್ನು ತೋರಿಸಬಾರದು. ಅನುಕೂಲವಾದರೆ ನವಗ್ರಹ ಹೋಮ ಮಾಡಬೇಕು.

ವೇದವ್ಯಾಸ ಜಯಂತಿ

ವೇದವ್ಯಾಸ ಜಯಂತಿ

ವೇದಗಳನ್ನು ವಿಭಾಗ ಮಾಡಿದವರೇ ವೇದವ್ಯಾಸರು. ಈ ಅವತಾರವು ಇಂದೇ ಆಯಿತೆಂದು ಹೇಳಲಾಗಿದೆ. ವ್ಯಾಸರ ಬಗ್ಗೆ ಬಹಳ ಪರಿಚಯಿಸುವುದಿದೆ. ಮೊದಲಿಗೆ ಅವರನ್ನು ತಿಳಿಯಬೇಕಾಗಿದ್ದು ಜ್ಞಾನದ ನಿಧಿ ಎನ್ನುವುದಾಗಿ. ವೇದಗಳ ಸಾರವನ್ನು ಎಲ್ಲರಿಗೂ ತಿಳಿಯುವುದಕ್ಕಾಗಿ ಮಹಾಭಾರತ, ಭಾಗವತ, ಮೊದಲಾದ ಗ್ರಂಥಗಳನ್ನು ರಚಿಸಿದರು. ಅದನ್ನು ಪ್ರಚಾರ ಸುಮಂತು, ಜೈಮಿನಿ, ವೈಶಂಪಾಯನ, ಶುಕ ಇವರೆ ಮೊದಲಾದವರನ್ನು ಮುಂದೆ ಮಾಡಿದರು. ಇವರು ಸತ್ಯವತಿ ಹಾಗು ಪರಾಶರರ ಮಗನಾಗಿ ಯಮುನಾ ನದಿಯ ದ್ವೀಪದಲ್ಲಿ ಅವತರಿಸಿದರು. ಇವರು ೧೮ (ಹದಿನೆಂಟು) ಪುರಾಣಗಳನ್ನು ರಚಿಸಿದರು. ನಾವು ಒದಿದ ವಿದ್ಯೆ ಸಂರಕ್ಷಿತವಾಗಿರಬೇಕಾದರೆ ಇವರ ಸ್ತೋತ್ರ ನಾಮಸ್ಮರಣೆ ಅತ್ಯಗತ್ಯ.

ಕೂರ್ಮ ಜಯಂತಿ

ಕೂರ್ಮ ಜಯಂತಿ


ಕರ್ಮ ಹರಿಃ ಮಾಂ ನಿರಯಾತ ಅಶೇಷಾತ್

ಇದು ಭಗವಂತ ಅವತಾರವೆ. ಅವನು ಆಮೆಯ ರೂಪದಲ್ಲಿ ಬಂದು ಸಮುದ್ರ ಮಥನದ ವೇಳೆಯಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ಆ ಬಂಗಾರದ ಪರ್ವತವನ್ನು ತನ್ನ ಬೆನ್ನಿನ ಮೇಲೆ ಧಾರಣ ಮಾಡಿದ. ಇದು ಒಂದಾದರೆ ಸಮಸ್ತ ಚೇತನಾಚೇತನಾತ್ಮಕವಾದ ಪ್ರಪಂಚವನ್ನೇ ತನ್ನ ಬೆನ್ನಿನ ಮೇಲೆ ಹೊತ್ತಿದ್ದಾನೆ. ಅಂತಹ ಭಗವಂತನನ್ನು ನೆನೆಸುವುದರಿಂದ ಎಲ್ಲ ಪಾಪಗಳು ನಿವೃತ್ತವಾಗುತ್ತವೆ. ಇದು ಹತ್ತಿ ಅವತಾರಗಳಲ್ಲಿಯೂ ಒಂದಾಗಿದೆ ಮತ್ತು ಕೂರ್ಣ ಪುರಾಣವೆಂದೇ ಪ್ರಸಿದ್ಧವಾಗಿದೆ. ಜೊತಿಷ್ಯ ಶಾಸ್ತ್ರಗಳಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಗೃಹರತವಾದ ವಾಸ್ತಿದೋಷ ಲಿವಾರಣೆಗೆ ಕೂರ್ಮವನ್ನು ಇಡುವುದುಂಟು. ಆ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದಿನವುದು.

ನರಸಿಂಹ ಜಯಂತಿ

ನರಸಿಂಹ ಜಯಂತಿ

ವೈಶಾಖ ಶುದ್ಧ ತ್ರಯೋದಶಿ ಚಿತ್ತಾ ನಕ್ಷತ್ರ ವಜ ಸಿದ್ಧಿ ಯೋಗಗಳು ತೈತಲಿಕರಣದಂದು ನರಸಿಂಹ ಜಯಂತಿ. ನರಸಿಂದ ರೂಪಿಯಾಗಿ ಅವತಾರ ಮಾಡಿದ ದಿವಸ.

ದುಷ್ಟನಾದ ಹಿರಣ್ಯಕಶಪುವನ್ನು ಸಂಹಾರ ಮಾಡುವುದಕ್ಕೆ ಅವತಾರ ಮಾಡಿದ ದೇವರು ಎಲ್ಲೆ ಇದ್ದರೂ ಸಜ್ಜನರ ಸಂರಕ್ಷಣೆಯನ್ನು ಮಾಡುತ್ತಾರೆ. ಕಂಬದಿಂದ ಹೊರಗೆ ಬಂದು ದೈತ್ಯನನ್ನು ಸಂಹರಿಸಿ ಪ್ರಲ್ಹಾದನನ್ನು ಅನುಗ್ರಹಿಸಿದ ಈ ನರಸಿಂಹ ರೂಪವನ್ನು ನೆನೆಸುವಾಗ ಪ್ರಲ್ಹಾದನನ್ನು ಮರೆಯುವಂತಿಲ್ಲ. ನರಸಿಂಹ ದೇವರನ್ನು ನೆನೆಸುವುದರಿಂದ ಎಲ್ಲ ತರಹದ ಪಾಪಗಳು ಹೋಗಿತ್ತವೆ. ಯಾವ ಗ್ರಹಗಳ ಭಾದೆ ಆಗುವುದಿಲ್ಲ. ಒಳಗೆ ಮನೆ ಮಾಡಿಕೊಂಡಿದ್ದ ಶತ್ರುಗಳು ಭಸ್ಮರಾಗುತ್ತಾರೆ. ಹೊರಗೆ ಇರುವ ಶತ್ರುಗಳು ದೂರ ಪಲಾಯನಗೈಯುತ್ತಾರೆ. ಅನೇಕ ವಿಧವಾದ ರೋಗಗಳು ದೂರವಾಗುತ್ತವೆ. ನವಗ್ರಹಗಳಲ್ಲಿ ಒಂದಾದ ಶನಿಯಪ ತಾನೇ ಸ್ವತಃ ನರಸಿಂಹ ದೇವರ ಮೇಲೆ ಸ್ತೋತ್ರವನ್ನು ಮಾಡಿದ್ದಾನೆ. ಅದರಲ್ಲಿ ಅವನೇ ನರಸಿಂಹ ದೇವರನ್ನು ನೆನೆಸಿದವರನ್ನು ನಾನು ಕಾಡುವುದಿಲ್ಲಾ ಎಂದು ಹೇಳಿದ್ದಾನೆ. ಇಂದಿನ ದಿನ ನರಸಿಂಹ ದೇವರನ್ನು ನೆನೆಯದೆ ಯಾರೂ ಇರಬಾರದು. ಎಷ್ಟೇ ವತ್ತಡ ಇದ್ದರೂ ಕೂಡ ಅವನ್ನು ನೆನಿಸಲೇಬೇಕು. ಇಲ್ಲದಿದ್ದರೆ ನಿಮಗೆ ಶತ್ರುಭಯ, ಶನಿಯ ಗ್ರಹಚಾರ, ರೋಗ, ಆಕಸ್ಮಿತವಾಗಿ ಬರುವ ಆಪತ್ತು ತಪ್ಪಿದ್ದಲ್ಲಾ. ಅನೂಕೂಲವಾದರೆ ಹೋಮವನ್ನೂ ಮಾಡಬೇಕು. ಆಗದಿದ್ದರೆ, ಹೋಮ ಆಗುವ ಸ್ಥಳಕ್ಕೆ ಹೋಗಬೇಕು.

ಗಂಗೋತ್ಪತ್ತಿ

ಗಂಗೋತ್ಪತ್ತಿ

ವೈಶಾಖ ಶುದ್ಧ ಸಪ್ತಮಿ, ಪುಶ್ಯನಕ್ಷತ್ರ, ಶೂಲಯೋಗ, ಗಜಕರಣದಂದು

ಜಹ್ನುರಾಜನು ರಭಸದಿಂದ ಬಂದು ಅವನ ಯಜ್ಞವಾಟವನ್ನೆಲ್ಲ ಆವರಿಸಿದಾಗ ಕ್ರೋಧದಿಂದ ಎಲ್ಲ ಜಲವನ್ನು ಪಾನಮಾಡಿದ ಮತ್ತೆ ಭಗೀರಥ ಪ್ರಾರ್ಥನೆ ಮಾಡಿದಾಗ ತನ್ನ ಬಲದಿಂದ ಹೊರಗೆ ಹಾಕಿದ ದಿನ ಇದು.

ನದಿಗಳಲ್ಲಿ ಶ್ರೇಷ್ಠವಾದ "ಗಂಗಾ" ಹುಟ್ಟಿದ ದಿವಸ. ಅವತ್ತು ಗಂಗೆಯ ಸ್ಮರಣೆಯನ್ನು ಮಾಡಬೇಕು. ಅವಳು ಭೂಮಿಗೆ ಬಂದು ಎಲ್ಲರ ಪಾಪಗಳನ್ನು ಕಳೆಯುವುದಕ್ಕಾಗಿ ಸಿದ್ಧಳಾಗಿದ್ದಾಳೆ. ನಾವು ಅವಳನ್ನು ೧೦೦ ಯೋಜನೆಗಳ ದೂರದಲ್ಲಿದ್ದು ನಮ್ಮ ಮನೆಯಲ್ಲಿ ಮಾಡುವ ಸ್ನಾನ ಕಾಲದಲ್ಲಿ ನಾವು ನೆನಪಿಸಿದಾಗಲು ಅವಳು ಆ ಜಲದಲ್ಲಿ ಸನ್ನಿಹಿತಳಾಗುತ್ತಾಳೆ. ಆ ಜಲದಿಂದ ನಾವು ಸ್ನಾನ ಮಾಡಿದಾಗ ನಮ್ಮ ಪಾಪಗಳು ಕಳೆಯುತ್ತವೆ. ಇವೆಲ್ಲಾ ಕೇವಲ ಗಂಗೆಯ ನಾಮಸ್ಮರಣೆಯಿಂದಲೆ ನೆರವೇರುವ ಕಾಯಕ. ಇವಳು ದೇವತೆಗಳ ಲೋಕದಲ್ಲಿಯು ಹರಿದಿದ್ದಾಳೆ. ಅದಕ್ಕೆ ಇವಳಗೆ ದ್ಯುನದಿ ಎಂದು ಕರೆಯುತ್ತಾರೆ. ಎಂದೆಂದಿಗು ಬತ್ತದೆ ಇದ್ದ ನದಿ ಎಂದರೆ ಅದು ಗಂಗಾ ನದಿ. ಇವಳು ಹಿಮವಂತನ ಜೇಷ್ಠ ಪುತ್ರಿ ಆಗಿದ್ದಾಳೆ. ಭಗೀರಥನ ಪ್ರಯತ್ನದಿಂದ ಧರೆಗೆ ಬಂದವಳು. ನಂದಿನಿ, ನಲಿನಿ, ಸೀತಾ, ಮಾಲತಿ, ಮಲಾಪಹ ಎಂದು ಇವಳನ್ನು ಕರೆಯುವುದುಂಟು.

ಪರಶುರಾಮ ಜಯಂತಿ

ಪರಶುರಾಮ ಜಯಂತಿ

ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ

ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.

ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||

ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.