ಸೋಮವಾರ, ಮಾರ್ಚ್ 23, 2009

ಹನುಮ ಜಯಂತಿ ಮಹತ್ವ

ಹನುಮ ಜಯಂತಿ

ಚೈತ್ರ - ಹುಣ್ಣಿಮೆ ------ ದವನದ ಹುಣ್ಣಿಮೆ

ಈ ಸಲ ೯-೦೪-೨೦೦೯, ಗುರುವಾರ, ಹಸ್ತಾ ನಕ್ಷತ್ರ, ಬ್ಯಾಘ್ಯಾತಯೋಗ, ಭದ್ರಾಕರಣ ಇಂದು ಚೈತ್ರ ಶುದ್ಧ ಹುಣ್ಣಿಮೆಯ ದಿನ ಮುಂಜಾನೆ ೬:೧೬ (6:16) ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು. ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:

ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) - ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು - ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ - ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.

ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು. ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು. ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ. (ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ ಹತ್ತಿರದ ದೇವಸ್ಧಾನಕ್ಕೆ ಹೋಗಿ ಪೂಜಾದಿಗಳನ್ನು ಸಲ್ಲಿಸಬೇಕು.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ