ಸೋಮವಾರ, ಮಾರ್ಚ್ 23, 2009

ಯುಗಾದಿಯ ಮಹತ್ವ

ಯುಗಾದಿ

ವಸಂತ ಋತು - ಚೈತ್ರ ಮಾಸ - ಶುಕ್ಲ ಪಕ್ಷ - ಪ್ರತಿಪದ

ಈ ದಿನದ ಮಹತ್ವ:

ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ ಯುಗಾದಿ. ಯುಗಾದಿಯಿಂದ ಒಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಇದೇ ನಮ್ಮ ಹಿಂದೂ ಪಂಚಾಗದ ಪ್ರಕಾರ ನಮ್ಮೆಲ್ಲರಿಗೂ ಹೊಸ ವರ್ಷ. ಕ್ರಿಸ್ತ ಶಖೆ ೨೦೦೯ರ ಮಾರ್ಚ-೨೭ ರಂದು ಬರುವ ಯುಗಾದಿಯಿಂದ "ವಿರೋಧಿನಾಮ ಸಂವತ್ಸರ" ಎಂಬ ಸಂವತ್ಸರ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಂವತ್ಸರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಪ್ರತಿ ಸಂವತ್ಸರಕ್ಕೆ (ಅಂದರೆ ಪ್ರತಿ ವರ್ಷಕ್ಕೆ) ಒಂದೊಂದು ಹೆಸರು ಕೊಡಲಾಗಿದೆ. ಸಂವತ್ಸರಗಳು ಒಟ್ಟು ೬೦ (60) ಇದ್ದು, ಅವು ಒಂದಾದ ಮೇಲೊಂದು ಬರುತ್ತವೆ. ಈ ಹಿಂದೆ ಕಳೆದುದು (ಅಂದರೆ ೨೬-ಮಾರ್ಚ-೨೦೦೯ ವರೆಗು ಒಂದು ವರ್ಷ ಕಾಲ ಕಳೆದ ಸಂವತ್ಸರ) "ಸರ್ವಧಾರಿ ನಾಮ ಸಂವತ್ಸರ". ಪ್ರತಿ ಸಂವತ್ಸರವು ಚೈತ್ರ ಶುದ್ಧ ಪ್ರತಿಪದದಿಂದ, ಫಾಲ್ಗುಣ ಕೃಷ್ಣ ಅಮವಾಸ್ಯದ ವರೆಗೆ ಒಂದೊಂದಾಗಿ ಬರುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಒಬ್ಬ ೬೦ ವರ್ಷದ ವ್ಯಕ್ತಿ ಹಿಂದೂ ಪಂಚಾಂಗದ ಎಲ್ಲ ಸಂವತ್ಸರಗಳನ್ನು ನೋಡಿರುತ್ತಾನೆ. ಈ ನಿಮಿತ್ತವಾಗಿ ಕೆಲವು ಮನೆಗಳಲ್ಲಿ "ಶಷ್ಟಾಬ್ದಿ" (೬೦ ವರ್ಷದ ಶಾಂತಿ) ಆಚರಿಸುವ ಸಾಂಪ್ರದಾಯಿಕ ಪದ್ಧತಿಯು ಇದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಕಡೆ ಬರೆಯುತ್ತೇನೆ,

ಯುಗಾದಿಯ ದಿನ ಆಚರಿಸಬೇಕಾದ ಕಾರ್ಯಕ್ರಮಗಳು:

ಚೈತ್ರ ಶುಕ್ಲ ಪ್ರತಿಪದ ಮುಂಜಾನೆ ಎದ್ದು ಶಾಂತವಾದ ಮನಸ್ಸಿನಿಂದ ಹಿರಿಯರು ಹೇಳಿದ ಹಾಗೆ ಕೇಳುತ್ತಾ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿ ಅಮೇಲೆ ಕನ್ನಡಿಯಲ್ಲಿ ಮುಖವನ್ನು ವೀಕ್ಷಿಸಬೇಕು. ಬಂಧು ಬಾಂಧವರಿಂದ ಕೂಡಿಕೊಂಡು ಅಭ್ಯಂಗ ಸ್ನಾನ ಮಾಡಿ, ಪೂಜಾದಿಗಳನ್ನು ಪೂರೈಸಿ ಹೊಸ ಬಟ್ಟೆಗಳನ್ನು ತೊಟ್ಟು, ದೈವಜ್ಞರಿಂದ, ಅಂದರೆ ಶಾಸ್ತ್ರಜ್ಞ ಜೋತಿಷಿಗಳಿಂದ ಆ ವರ್ಷದ ಫಲಗಳನ್ನು ಕೇಳಿ ತಿಳಿಯಬೇಕು. ಇದು ಅಲ್ಲದೇ ಇನ್ನೊಂದು ಸಂಪ್ರದಾಯವಿದೆ. ಮುಂಜಾನೆ ಎದ್ದಾಕ್ಷಣ ಪಂಚಾಂಗ ಶ್ರವಣ ಮಾಡುವವರು ಇದ್ದಾರೆ. ಎರಡೂ ಒಳ್ಳೆಯ ಮಾರ್ಗಗಳೇ. ಇದರ ಜೊತೆ ಈ ಕೆಳಗಿನ ಪದ್ಧತಿಗಳನ್ನು ಆಚರಿಸಬೇಕು.

೧) ಪಂಚಾಂಗ ಪೂಜೆಯನ್ನು ಮಾಡಬೇಕು.
೨) ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಬೇಕು
೩) ಮನೆಯವರೆಲ್ಲರೂ ಸೇರಿ "ಬೇವು-ಬೆಲ್ಲ" ಸ್ವೀಕಾರ ಮಾಡಬೇಕು. --- ಬೇವು, ಇದು ದುಃಖದ - ಪಾಪದ ಸಂಕೇತ. ಬೆಲ್ಲ, ಇದು ಪುಣ್ಯದ-ಸುಖದ ಸಂಕೇತ. ಈ ಎರಡೂ ಅವಸ್ಥೆಯನ್ನು ಅತ್ಯಂತ ಧೈರ್ಯವಾಗಿ ಎದರಿಸುತ್ತೇನೆ ಎಂದು ಯುಗಾದಿಯ ದಿನವೇ ಪ್ರತಿಜ್ಞೆಗೈಯುವ ಒಂದು ಕೆಲಸ.
೪) ತೈಲಾಭ್ಯಂಗನ ಅವಶ್ಯವಾಗಿ ಮಾಡಲೇಬೇಕು. ತೈಲಸ್ನಾನದ ಮಹತ್ವವನ್ನು ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ:
ವಸಂತ ಋತುವಿನ ಮೊದಲನೆಯ ದಿನವಾದ ಬಲಿ ಪ್ರತಿಪದಾ ದಿನದಂದು ಯಾವನು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದಿಲ್ಲವೋ ಅವನು ದರಿದ್ರನು ಹಾಗೂ ಮಹಾನರಕಗಾಯಿಯಾಗಿತ್ತಾನೆ ಎಂದು ವಸಿಷ್ಠಸ್ಮುತಿಯಲ್ಲಿ ಹೇಳಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ