ಜೈಷ್ಠ ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜೈಷ್ಠ ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 31, 2009

ಮಳೆಗಾಲದ ಪ್ರಾರಂಭ

ಮಳೆಗಾಲದ ಪ್ರಾರಂಭ

ಜೈಷ್ಠ - ಕೃಷ್ಣ - ಪ್ರತಿಪದ

ಇವತ್ತು ಮೃಗಶಿರಾ ಪ್ರವೇಶವಾಗುತ್ತದೆ. ಇವತ್ತಿನಿಂದ ಮಳೆಗಾಲದ ಕೆಲಸಗಳನ್ನು ಪ್ರಾರಂಭಿಸಬಹುದು. ಶಾಸ್ತ್ರದಲ್ಲಿರುವ ಇದರ ವಿವರಗಳು ಮತ್ತು ವೈಜ್ಞಾನಿಕವಾಗಿ ಅದಕ್ಕಿರುವ ಅರ್ಥವನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸುತ್ತೇವೆ.

ವಟ ಸಾವಿತ್ರಿ ವ್ರತ

ವಟ ಸಾವಿತ್ರಿ ವ್ರತ

ಜೈಷ್ಠ -- ಹುಣ್ಣಿಮೆ

ಈ ವ್ರತವು ಸೌಮಾಂಗಲ್ಯದಾಯಕ, ಸಂತಾನದಾಯಕ ಮತ್ತು ವಿವಾಹದಾಯಕವಾಗಿದೆ. ಈ ವ್ರತವನ್ನು ಮೂರು ದಿನಗಳಲ್ಲಿ ಆಚರಿಸುವುದಕ್ಕೆ ಹೇಳಿದ್ದಾರೆ. ಒಂದು ದಿನವಾದರೂ ಆಚರಿಸಲೇಬೇಕು. ಇದರ ವಿವರಗಳನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ದಶಹರಾ ವ್ರತ ಮತ್ತು ಭಾಗಿರಥಿ ಜಯಂತಿ

ದಶಹರಾ ವ್ರತ

ಜೈಷ್ಠ -- ಶುಕ್ಲ -- ದಶಮಿ

ಈ ದಿನ, ಮಂಗಶವಾರ, ಹಸ್ತಾ ನಕ್ಷತ್ರದಲ್ಲಿ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದಳು. ಈ ದಿನ ವ್ಯತಿಪಾತ ಯೋಗ, ಗಜಕರಣ ಆನಂದಕರಣ, ಕನ್ಯಾರಾಶಿಯಲ್ಲಿ ಚಂದ್ರ ಹಾಗು ವೃಷಭ ರಾಶಿಯಲ್ಲಿ ರವಿ ಇರುವರು. ಇವೆಲ್ಲಾ ಸೇರಿ ಮಹಾ ಯೋಗ ಸಂಭವಿಸುತ್ತದೆ. ಹತ್ತು ವಿಧವಾದ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ನದಿಸ್ನಾನ, ತಿಲತರ್ಪಣ, ಗಂಗಾ ಪೂಜಾದಿಗಳನ್ನು ಮಾಡಬೇಕು. ಹತ್ತು ವಿಧವಾದ ಪಾಪಗಳಲ್ಲಿ ಮೂರು ರೀತಿಯ ಪಾಪಗಳು --

೧. ಕಾಯಿಕ -- ಅಂದರೆ ದೇಹದಿಂದ ಸಂಭವಿಸಬಹುದಾದ ಪಾಪ. ಇದರಲ್ಲಿ, ಒಬ್ಬ ತಾನು ಪರರಿಗೆ ಏನನ್ನು ಕೊಡದೆ ಕೇವಲ ಅವರಿಂದ ಸ್ವೀಕಾರ ಮಾಡುವುದು. ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸೇವನ ಮಾಡುವುದು, ಈ ರೀತಿಯಾದ ಮೂರು ಪಾಪಗಳು ಬರುತ್ತವೆ.
೨. ವಾಚಕ -- ಅಂದರೆ ಮಾತಿನಿಂದ ಆಗುವ ಪಾಪ. ಕ್ರೂರವಾಗಿ ನುಡಿಯುವುದು, ಸುಳ್ಳು ಹೇಳಿವುದು, ಚಾಡೀ ಹೇಳುವುದು.ಅಸಂಬಂಧವಾಗಿ ಮಾತನಾಡುವುದು, ಈ ನಾಲ್ಕು ವಾಚಕ ಪಾಪಗಳು.
೩. ಮಾನಸಿಕ -- ಅಂದರೆ ವಿಚಾರದಿಂದಾಗುವ ಪಾಪ. ಪರರ ಸಂಪತ್ತನ್ನು ಅಪಹಾರ ಮಾಡುವುದರಲ್ಲಿ ಮನಸ್ಸು ಮಾಡುವುದು, ಮನಸ್ಸಿನಲ್ಲಿಯೆ ಅನ್ಯರಿಗೆ ಕೆಟ್ಟು ಬಯಸುವುದು, ವ್ಯರ್ಥವಾಗಿ ಮನಸ್ಸಿನ ಆವೇಶ ಹೊಂದುವುದು -- ಈ ಮೂರು ಮಾನಸಿಕ ಪಾಪಗಳು.

ಈ ರೀತಿಯಾಗಿ ದಶವಿಧ ಪಾಪಗಳಿವೆ. ಆ ಪಾಪಗಳು ನಷ್ಠವಾಗುವುದಕ್ಕೆ ದಶಹರಾವನ್ನು ಆಚರಿಸಬೇಕು. ಹಿಂದಿನ ಹತ್ತು ಜನ್ಮಗಳಲ್ಲಿ ಸಂಗ್ರಹವಾದ ಬ್ರಹ್ಮ ಹತ್ಯೆಗೆ ಸಮಾನವಾದ ಪಾಪಗಳು ಸ್ನಾನ ಮಾತ್ರದಿಂದಲೇ ನಾಶವಾಗುವುದರಿಂದ ಕೂಡ ಇದನ್ನು ದಶಹರಾ ಎಂದು ಕರೆಯಲಾಗಿದೆ.

ಭಾಗಿರಥಿ ಜಯಂತಿ

ಜೈಷ್ಠ -- ಶುಕ್ಲ -- ದಶಮಿ

ದೇವತೆಗಳ ಲೋಕದಲ್ಲಿ ಸಂಚರಿಸುವ ಸ್ವರ್ಧುನಿಯಾದ ಗಂಗಾದೇವಿಯು ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಬಂದ ದಿನ. ಭಗೀರಥ ತನ್ನ ಪೂರ್ವಿಕರ ಉದ್ಧಾರವಾಗಬೇಕೆಂದು ಸತತ ಪ್ರಯತ್ನ ಮಾಡಿ ಅವಳನ್ನು ಭೂಮಿಗೆ ಕರೆತಂದ ದಿವಸವೇ ಭಾಗೀರಥಿ ಜಯಂತಿ. ಗಂಗೆಯು ಭಗೀರಥನ ಪ್ರಾರ್ಥನೆಯಂತೆ ಪ್ರತಿಪದೆಯ ದಿನ ಭೂಮಿಯಲ್ಲಿ ಪ್ರಕಳಾಗಿ, ದಶಮೆಯ ದಿನ ಪ್ರವಾಹ ರೂಪವನ್ನು ಧರಿಸಿದಳು. ಆದ್ದರಿಂದ ಪ್ರತಿಪದಾದಿಂದ ದಶಮಿಯವರೆಗಿನ ದಿನಗಳು ಅತ್ಯಂತ ಶುದ್ಧವಾದ ದಿನಗಳು.

ಜೈಷ್ಠ ಮಾಸ

ಜೈಷ್ಠ ಮಾಸ

ಜೈಷ್ಠ ಮಾಸದ ಹೆಸರಿನಿಂದಲೇ ಅದರ ಶ್ರೇಷ್ಠತೆಯನ್ನು ತಿಳಿದು ಬರುತ್ತದೆ. ಈ ಮಾಸದಲ್ಲಿ ಮೊಸರು ಅನ್ನ ದಾನಕ್ಕೆ ಬಹಳ ಮಹತ್ವವನ್ನು ಹೇಳಿದ್ದಾರೆ. ಈ ಮಾಸದ ಮಹತ್ವ ಭಗೀರಥನ ಕಥೆಯಲ್ಲಿ ಬರುತ್ತದೆ. ಶಿವನು ಭಗೀರಥನಿಗೆ ಈ ರೀತಿಯಾಗಿ ಆಜ್ಞೆ ಮಾಡಿದನು --

"ಜೈಷ್ಠಮಾಸದಲ್ಲಿ ನಿತ್ಯ ಪ್ರಾತಃ ಕಾಲದಲ್ಲಿ ಎದ್ದು ಪ್ರಾಕರ್ವಿಧಿಗಳನ್ನು ಮುಗಿಸಿದ ನಂತರ ವಿಧಿಪೂರ್ವಕವಾಗಿ ಸ್ನಾನ ಮಾಡಬೇಕು. ಆಮೇಲೆ ತ್ರಿವಿಕ್ರಮ ರೂಪಿಯಾದ ಪರಮಾತ್ಮನ ಪೂಜೆಯನ್ನು ಮಾಡಬೇಕು. ಅನಂತರ ಹೇರಾಜಾ ಯೋಗ್ಯರಾದ ಬ್ರಾಹ್ಮಣರಿಗೆ ಮೊಸರು ಅನ್ನವನ್ನು ಹಾಗು ನೀರನ್ನು ದಾನವಾಗಿ ಕೊಡಬೇಕು. ಈ ಪ್ರಕಾರ ಒಂದು ತಿಂಗಳು ಪರ್ಯಂತ ನೀನು ಭಕ್ತಿಯಿಂದ ಆಚರಿಸಿದರೆ ಶ್ರೀ ಹರಿಯು ಪ್ರಸನ್ನನಾಗಿ, ಸರ್ವ ಪಾಪಗಳನ್ನು ಕಳೆಯಲು ಸಮರ್ಥಳಾದ ಗಂಗೆಯನ್ನು ಭೂಮಿಗೆ ಕರೆದು ತರುವನು." ಈ ಪ್ರಕಾರ ಶಿವನು ತಿಳಿಸಿದಂತೆ ಭಗೀರಥ ರಾಜನು ವ್ರತವನ್ನು ಆಚರಿಸಿದನು. ಆ ವ್ರತಾಚಾರಣೆ ಮಾತ್ರದಿಂದ ವಿಷ್ಣುವು ಪ್ರಸನ್ನನಾಗಿ ರಾಜನಿಗೆ ಪ್ರತ್ಯಕ್ಷನಾದನು, ಗಂಗಾವತಾರಣ ಮಾಡುವುದಾಗಿ ಅವನಿಗೆ ವರವನ್ನು ಕೊಟ್ಟನು. ಈ ರೀತಿಯಾಗಿ ಭವಿಷ್ಯ ಪುರಾಣದಲ್ಲಿ ಬಂದ ಜೈಷ್ಠ ಮಾಸದ ಮಹತ್ಮೆಯಲ್ಲಿ ವರ್ಣನೆ ಮಾಡಿದ್ದಾರೆ. ಈ ಮಾಸವು ಗಂಗಾವತಾರಕ್ಕೆ ಕಾರಣಿಭೂತವಾದ ಮಾಸ ಎಂಬುದಾಗಿ ನಾವು ತಿಳಿಯಬೇಕು. ಈ ಒಂದು ಮಹಾಕಾರ್ಯದಿಂದ ಎಷ್ಟೋ ಸಾತ್ವಿಕರ ಉದ್ಧಾರವಾಗಿದೆ, ಆಗುತ್ತಲೇ ಇದೆ.

ವಿಷ್ಣುರ್ವೈ ಸರ್ವದೇವಾನಾಂ ಜೈಷ್ಠಃ ಶ್ರೇಷ್ಠಃ ಪ್ರಜಾಪತಿಃ |
ತಥಾಯಂ ಸರ್ವಮಾಸಾನಾಂ ಜೈಷ್ಠ ಶ್ರೇಷ್ಠ ತಮಸ್ಮೃತಃ ||

ಎಲ್ಲ ದೇವತೆಗಳಲ್ಲಿ ವಿಷ್ಣುವು ಉತ್ತಮನಾಗಿರುವಂತೆ ಈ ಜೈಷ್ಠ ಮಾಸವು ಉಳಿದೆಲ್ಲ ಮಾಸಗಳಿಗಿಂತ ಶ್ರೇಷ್ಠವಾಗಿದೆ.