ಚೈತ್ರ-ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚೈತ್ರ-ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 31, 2009

ಮಣ್ಣೆತ್ತಿನ ಅಮವಾಸ್ಯ

ಮಣ್ಣೆತ್ತಿನ ಅಮವಾಸ್ಯ

ಜೈಷ್ಠ -- ಅಮವಾಸ್ಯ

ಈ ದಿನ ಮಣ್ಣಿನಿಂದ ಎರಡು ಎತ್ತುಗಳನ್ನು ಮಾಡಿ ವಿಧವಿತ್ತಾಗಿ ಪೂಜಿಸಬೇಕು. ವರ್ಷದಲ್ಲಿ ೫ ಬಾರಿ ಮೃತ್ತಿಕಾ ಪೂಜೆಯನ್ನು ಮಾಡುವುದಾಗಿ ಶಾಸ್ತ್ರವು ನಮಗೆ ಆಜ್ಞೆ ಮಾಡಿದೆ. ಅದರಲ್ಲಿ ಇದು ಒಂದು. ಈ ದಿನ ಮಣ್ಣಿನ ಎತ್ತು ಮಾಡಿ, ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು.

ಇದರ ಬಗ್ಗೆ ಈ ಒಂದು ಲೇಖನವಿದೆ -- http://sampada.net/blog/brahmana/12/09/2008/11695

ಸೋಮವಾರ, ಮಾರ್ಚ್ 23, 2009

ಹನುಮ ಜಯಂತಿ ಮಹತ್ವ

ಹನುಮ ಜಯಂತಿ

ಚೈತ್ರ - ಹುಣ್ಣಿಮೆ ------ ದವನದ ಹುಣ್ಣಿಮೆ

ಈ ಸಲ ೯-೦೪-೨೦೦೯, ಗುರುವಾರ, ಹಸ್ತಾ ನಕ್ಷತ್ರ, ಬ್ಯಾಘ್ಯಾತಯೋಗ, ಭದ್ರಾಕರಣ ಇಂದು ಚೈತ್ರ ಶುದ್ಧ ಹುಣ್ಣಿಮೆಯ ದಿನ ಮುಂಜಾನೆ ೬:೧೬ (6:16) ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು. ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:

ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) - ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು - ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ - ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.

ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು. ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು. ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ. (ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ ಹತ್ತಿರದ ದೇವಸ್ಧಾನಕ್ಕೆ ಹೋಗಿ ಪೂಜಾದಿಗಳನ್ನು ಸಲ್ಲಿಸಬೇಕು.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ರಾಮ ನವಮಿ ಮಹತ್ವ

ರಾಮ ನವಮಿ

ಚೈತ್ರ - ಶುಕ್ಲ - ನವಮಿ

ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಈ ಚೈತ್ರ ಶುಕ್ಲದಲ್ಲಿ ರಾಮ ಅವತಾರ ಮಾಡಿದ ದಿನವು ಬರುತ್ತದೆ. ಅದು ರಾಮನವಮಿ. ರಾಮ ಅವತಾರ ಮಾಡಿದ್ದು ಮಧ್ಯಾಹ್ನದ ಕಾಲದಲ್ಲಿ. ಅವನು ಅಂತಹ ಬಿಸಿಲಿನಲ್ಲಿ ಅವತರಿಸಿದ್ದರೂ ಚಂದ್ರನಂತೆ ಶಾಂತನಾಗಿದ್ದ. ದೇಶದೆಲ್ಲಡೆ ಬಹು ವಿಜೃಂಭಣೆಯಿಂದ ರಾಮನವಮಿ ಉತ್ಸವವನ್ನು ಆಚರಿಸುತ್ತಾರೆ. ಯಾರ ಮನೆ ದೇವರು ರಾಮಚಂದ್ರನಾದಿದ್ದಾನೋ ಅವರು ಚೈತ್ರ ಶುಕ್ಲ ಪ್ರತಿಪದದಿಂದ ನವರಾತ್ರಿ ದೀಪ ಹಾಕುತ್ತಾರೆ. ಇದಕ್ಕೆ ರಾಮ ನವರಾತ್ರಿ ಎಂದು ಕರೆಯುತ್ತಾರೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಗೌರಿ ತೃತಿಯಾ ಮಹತ್ವ

ಗೌರಿ ತೃತಿಯಾ

ಚೈತ್ರ ಶುಕ್ಲ ತೃತಿಯಾದಿಂದ ವೈಶಾಖ ಶುಕ್ಲ ತೃತಿಯಾ ವರೆಗೆ , ಒಂದು ತಿಂಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಶಿವ - ಪಾರ್ವತಿಯರ ಪೂಜೆಯನ್ನು ಮಾಡಬೇಕು. ಸುವಾಸಿನಿ ಸ್ತ್ರೀಯರಿಗೆ ಉಡಿ ತುಂಬಬೇಕು. ಪಾನಕ ಮತ್ತು ಕೋಸಂಬರಿಗಳನ್ನು ಕೊಡಬೇಕು. ಈ ಒಂದು ತಿಂಗಳು ಸಮಯದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ಈ ಸಾಮೂಹಿಕ ಆಚರಣೆಯನ್ನು ಮಾಡಲಾಗುತ್ತದೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಯುಗಾದಿಯ ಮಹತ್ವ

ಯುಗಾದಿ

ವಸಂತ ಋತು - ಚೈತ್ರ ಮಾಸ - ಶುಕ್ಲ ಪಕ್ಷ - ಪ್ರತಿಪದ

ಈ ದಿನದ ಮಹತ್ವ:

ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ ಯುಗಾದಿ. ಯುಗಾದಿಯಿಂದ ಒಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಇದೇ ನಮ್ಮ ಹಿಂದೂ ಪಂಚಾಗದ ಪ್ರಕಾರ ನಮ್ಮೆಲ್ಲರಿಗೂ ಹೊಸ ವರ್ಷ. ಕ್ರಿಸ್ತ ಶಖೆ ೨೦೦೯ರ ಮಾರ್ಚ-೨೭ ರಂದು ಬರುವ ಯುಗಾದಿಯಿಂದ "ವಿರೋಧಿನಾಮ ಸಂವತ್ಸರ" ಎಂಬ ಸಂವತ್ಸರ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಂವತ್ಸರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಪ್ರತಿ ಸಂವತ್ಸರಕ್ಕೆ (ಅಂದರೆ ಪ್ರತಿ ವರ್ಷಕ್ಕೆ) ಒಂದೊಂದು ಹೆಸರು ಕೊಡಲಾಗಿದೆ. ಸಂವತ್ಸರಗಳು ಒಟ್ಟು ೬೦ (60) ಇದ್ದು, ಅವು ಒಂದಾದ ಮೇಲೊಂದು ಬರುತ್ತವೆ. ಈ ಹಿಂದೆ ಕಳೆದುದು (ಅಂದರೆ ೨೬-ಮಾರ್ಚ-೨೦೦೯ ವರೆಗು ಒಂದು ವರ್ಷ ಕಾಲ ಕಳೆದ ಸಂವತ್ಸರ) "ಸರ್ವಧಾರಿ ನಾಮ ಸಂವತ್ಸರ". ಪ್ರತಿ ಸಂವತ್ಸರವು ಚೈತ್ರ ಶುದ್ಧ ಪ್ರತಿಪದದಿಂದ, ಫಾಲ್ಗುಣ ಕೃಷ್ಣ ಅಮವಾಸ್ಯದ ವರೆಗೆ ಒಂದೊಂದಾಗಿ ಬರುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಒಬ್ಬ ೬೦ ವರ್ಷದ ವ್ಯಕ್ತಿ ಹಿಂದೂ ಪಂಚಾಂಗದ ಎಲ್ಲ ಸಂವತ್ಸರಗಳನ್ನು ನೋಡಿರುತ್ತಾನೆ. ಈ ನಿಮಿತ್ತವಾಗಿ ಕೆಲವು ಮನೆಗಳಲ್ಲಿ "ಶಷ್ಟಾಬ್ದಿ" (೬೦ ವರ್ಷದ ಶಾಂತಿ) ಆಚರಿಸುವ ಸಾಂಪ್ರದಾಯಿಕ ಪದ್ಧತಿಯು ಇದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಕಡೆ ಬರೆಯುತ್ತೇನೆ,

ಯುಗಾದಿಯ ದಿನ ಆಚರಿಸಬೇಕಾದ ಕಾರ್ಯಕ್ರಮಗಳು:

ಚೈತ್ರ ಶುಕ್ಲ ಪ್ರತಿಪದ ಮುಂಜಾನೆ ಎದ್ದು ಶಾಂತವಾದ ಮನಸ್ಸಿನಿಂದ ಹಿರಿಯರು ಹೇಳಿದ ಹಾಗೆ ಕೇಳುತ್ತಾ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿ ಅಮೇಲೆ ಕನ್ನಡಿಯಲ್ಲಿ ಮುಖವನ್ನು ವೀಕ್ಷಿಸಬೇಕು. ಬಂಧು ಬಾಂಧವರಿಂದ ಕೂಡಿಕೊಂಡು ಅಭ್ಯಂಗ ಸ್ನಾನ ಮಾಡಿ, ಪೂಜಾದಿಗಳನ್ನು ಪೂರೈಸಿ ಹೊಸ ಬಟ್ಟೆಗಳನ್ನು ತೊಟ್ಟು, ದೈವಜ್ಞರಿಂದ, ಅಂದರೆ ಶಾಸ್ತ್ರಜ್ಞ ಜೋತಿಷಿಗಳಿಂದ ಆ ವರ್ಷದ ಫಲಗಳನ್ನು ಕೇಳಿ ತಿಳಿಯಬೇಕು. ಇದು ಅಲ್ಲದೇ ಇನ್ನೊಂದು ಸಂಪ್ರದಾಯವಿದೆ. ಮುಂಜಾನೆ ಎದ್ದಾಕ್ಷಣ ಪಂಚಾಂಗ ಶ್ರವಣ ಮಾಡುವವರು ಇದ್ದಾರೆ. ಎರಡೂ ಒಳ್ಳೆಯ ಮಾರ್ಗಗಳೇ. ಇದರ ಜೊತೆ ಈ ಕೆಳಗಿನ ಪದ್ಧತಿಗಳನ್ನು ಆಚರಿಸಬೇಕು.

೧) ಪಂಚಾಂಗ ಪೂಜೆಯನ್ನು ಮಾಡಬೇಕು.
೨) ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಬೇಕು
೩) ಮನೆಯವರೆಲ್ಲರೂ ಸೇರಿ "ಬೇವು-ಬೆಲ್ಲ" ಸ್ವೀಕಾರ ಮಾಡಬೇಕು. --- ಬೇವು, ಇದು ದುಃಖದ - ಪಾಪದ ಸಂಕೇತ. ಬೆಲ್ಲ, ಇದು ಪುಣ್ಯದ-ಸುಖದ ಸಂಕೇತ. ಈ ಎರಡೂ ಅವಸ್ಥೆಯನ್ನು ಅತ್ಯಂತ ಧೈರ್ಯವಾಗಿ ಎದರಿಸುತ್ತೇನೆ ಎಂದು ಯುಗಾದಿಯ ದಿನವೇ ಪ್ರತಿಜ್ಞೆಗೈಯುವ ಒಂದು ಕೆಲಸ.
೪) ತೈಲಾಭ್ಯಂಗನ ಅವಶ್ಯವಾಗಿ ಮಾಡಲೇಬೇಕು. ತೈಲಸ್ನಾನದ ಮಹತ್ವವನ್ನು ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ:
ವಸಂತ ಋತುವಿನ ಮೊದಲನೆಯ ದಿನವಾದ ಬಲಿ ಪ್ರತಿಪದಾ ದಿನದಂದು ಯಾವನು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದಿಲ್ಲವೋ ಅವನು ದರಿದ್ರನು ಹಾಗೂ ಮಹಾನರಕಗಾಯಿಯಾಗಿತ್ತಾನೆ ಎಂದು ವಸಿಷ್ಠಸ್ಮುತಿಯಲ್ಲಿ ಹೇಳಲಾಗಿದೆ.

ಚೈತ್ರ ಮಾಸದ ಮಹತ್ವ

ಚೈತ್ರ ಮಾಸದ ಮದತ್ವ

ಭವಿಷ್ಯೊತ್ತರ ಪುರಾಣದಲ್ಲಿ ಬಂದ ಚೈತ್ರಮಾಸದ ವಿಚಾರದಲ್ಲಿ ಈ ರೀತಿಯಾಗಿ ವರ್ಣನೆ ಇದೆ:

ವೈಶಾಖಾತ್ ಕಾರ್ತಿಕಃ ಶ್ರೇಷ್ಠಃ ಕಾರ್ತಿಕಾತ್ ಮಾಘ ಎವ ಚ
ಮಾಘಮಾಸಾದ್ ವರಶ್ಚಾಯಂ ಚೈತ್ರಮಾಸೋ ಭವಿಷ್ಯತಿ.

ವೈಶಾಖಕ್ಕಿಂತ ಕಾರ್ತಿಕ ಶ್ರೇಷ್ಠ ಕಾರ್ತಿಕಕ್ಕಿಂತ ಮಾಘ ಶ್ರೇಷ್ಠ ಮಾಘ ಮಾಸಕ್ಕಿಂತಲೂ ಚೈತ್ರ ಇದು ಶ್ರೇಷ್ಠ. ಈ ಮಾಸದಲ್ಲಿ ಮಾಡಿದ ಸತ್ಕಾರ್ಯ, ಸತ್ ಪಾತ್ರರಿಗೆ ದಾನಮಾಡಿದ್ದು, ಯಜ್ಞಯಾಗಾದಿಗಳನ್ನು ಮಾಡಿದ್ದು, ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕ ಫಲಪ್ರದವಾಗುತ್ತದೆ. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯದಲ್ಲಿ ಮಾಡಿದರೆ ಇನ್ನೂ ವಿಶೇಷ.

ಹನ್ನೆರಡು ಮಾಸಗಳಲ್ಲಿ ಮೊದಲನೆಯಾದ ಈ ಚೈತ್ರ ಮಾಸವು ಸಕಲ ಜೀವರಾಶಿಗೆ ಇಷ್ಟವಾದುದನ್ನು ಕೊಡುತ್ತಾ ತಾಯಿಯಂತೆ ಶೋಭಿಸುತ್ತದೆ. ಧರ್ಮಪ್ರವರ್ತಕರಾದ ಪ್ರಭು ಶ್ರೀ ರಾಮಚಂದ್ರನು ಈ ಮಾಸದಲ್ಲಿ ಅವತರಿಸಲು, ಸಂತುಷ್ಟರಾದ ದೇವತೆಗಳು ಹಾಗೂ ಸಜ್ಜನರೆಲ್ಲರೂ ದೇವದೇವೋತ್ತಮರಾದ ಆ ಪುರಾಣ ಪುರುಷನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಗೀತ - ವಾದ್ಯ- ನೃತ್ಯಗಳೊಂದಿಗೆ ಪ್ರಸನ್ನಗೊಳಿಸಿದರು. ಚೈತ್ರ ಮಾಸದ ಹಿರಿಮೆಯನ್ನು ಕೊಂಡಾಡಿ, ಆ ಮಾಸಕ್ಕೆ ವಿಶೇಷವಾದ ವರದಾನ ಕೊಡುವಂತೆ ಪ್ರಾರ್ಥಿಸಿದರು. ಆಗ ಪ್ರಸನ್ನನಾದ ಶ್ರೀರಾಮಚಂದ್ರನು -

ಸರ್ವೇಷಾಮೇವ ಮಾಸಾನಾಂ ಶ್ರೇಷ್ಠಾಶ್ಚಾಯಂ ಭವಿಷ್ಯತಿ
ಅಯೋಧ್ಯಾಯಾಂ ರಾಮತೀರ್ಥ ಸರಯಾಜಲ ಮಧ್ಯಗೇ
ಚೈತ್ರಸ್ನಾನಂ ಪ್ರರುರ್ವಾಣಾ ಸ್ತ್ರೀ ನರಾ ಮೋಕ್ಷಭಾಗಿನಃ

ಎಲ್ಲ ಮಾಸಗಳಿಗೆ ತಾಯಿಯಂತೆ ಇರುವ ಚೈತ್ರ ಮಾಸವು ಮಾಸಗಳಲ್ಲಿ ಶ್ರೇಷ್ಠವಾಗುವಂತೆ ವರದಾನ ಮಾಡಿದನು. ಅಷ್ಠೇ ಅಲ್ಲದೇ ತಾನು ಸ್ವತಃ ಅದೇ ಮಾಸದಲ್ಲಿ ಅವತಾರ ಮಾಡಿದನು. ಅಯೋಧ್ಯಯಲ್ಲಿರುವ ಸರಯೂ ನದಿ (ರಾಮತೀರ್ಥ) ಅಲ್ಲಿ ಸ್ನಾನ ಮಾಡಿದವರಿಗೆ, ಅವರಿಗೆ ಬರುವ ಎಲ್ಲ ಆಪತ್ತುಗಳನ್ನು ದೂರ ಮಾಡುತ್ತೇನೆ ಎಂದು ಹೇಳಿದ್ದಾನೆ.

ಚೈತ್ರ ಮಾಸದಲ್ಲಿ ಮಾಡಬೇಕಾದ ಕಾರ್ಯಗಳು

ಮಾರ್ಗದಲ್ಲಿ ಹೋಗುವವನಿಗೆ ನೀರಿನ ವ್ಯವಸ್ಥೆ (ಅರವಟ್ಟಿಗೆ)
ಬಿಸಿಲಿನಲ್ಲಿ ಬಂದವರಿಗೆ ಒಳ್ಳೆಯ ನೆರಳಿನ ವ್ಯವಸ್ಥೆ
ಊಟವಿಲ್ಲದವನಿಗೆ ಊಟ ವಸತಿ ವ್ಯವಸ್ಥೆ

ನೀರು ದಾನ ಮಾಡದೆ ಇದ್ದಲ್ಲಿ ಅವನು ಮುಂದೆ ಜಾತಕ ಪಕ್ಷಿಯಾಗಿ ಹುಟ್ಟಿ ನೀರಿಗಾಗಿ ಪರದಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿಲಾಗಿದೆ.
ಗೋದಿ, ಹಾಸಿಗೆ (ಶಯ್ಯಾ), ಬೆಲ್ಲ, ತುಪ್ಪ, ಮೊಸರು, ನೆಲ್ಲಿಕಾಯಿ, ಮಾವು ಇವೆ ಮೊದಲಾದವುಗಳು ವಿಶೇಷ ಪುಣ್ಯಕಾರಿ.

ಚೈತ್ರ ಮಾಸದಲ್ಲಿ ಅಯೋಧ್ಯಾ ಪಟ್ಟಣದಲ್ಲಿ ಇರುವ ಸರಯೂ ನದಿಯಲ್ಲಿ (ರಾಮತೀರ್ಥದಲ್ಲಿ) ಸ್ನಾನ ಮಾಡಬೇಕು. ವಿಶೇಷವಾಗಿ ರಾಮಾಯಣ ಶ್ರವಣ ಮಾಡಬೇಕು.
ಶ್ರಾಸ್ತ್ರದ ಒಂದು ಶ್ಲೋಕದಲ್ಲಿ ಈ ರೀತಿ ಹೇಳಲಾಗಿದೆ

ಸರ್ವ ತೀರ್ಥೇಷು ಯತ್ ಪುಣ್ಯಂ ಸರ್ವ ದಾನೇಷು ಯತ್ ಫಲಂ |
ರಾಮಾಯಣಸ್ಯ ಪಠಣಾತ್ ತತ್ ಫಲಂ ನವರಾತ್ರಕೇ ||

ಇದರ ಅರ್ಥ :

ಎಲ್ಲ ತೀರ್ಥಗಳಲ್ಲಿ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಯಾವ ವಿಶಿಷ್ಠ ಪುಣ್ಯ ಪ್ರಾಪ್ತವಾಗುವುದೋ, ಎಲ್ಲ ದಾನಗಳನ್ನು ಮಾಡಿದರೇ ಯಾವ ಪುಣ್ಯ ಪ್ರಾಪ್ತವಾಗುವುದೋ, ಆ ಪುಣ್ಯ ರಾಮಾಯಣ ಶ್ರವಣದಿಂದ ಬರುತ್ತದೆ.

ಈ ಮಾಸದಲ್ಲಿ ಬರುವ ಮುಖ್ಯ ದಿನಗಳು:

೧) ಯುಗಾದಿ -- ಶುಕ್ಲ ಪ್ರತಿಪದ
೨) ಗೌರಿ ತೃತಿಯಾ -- ಶುಕ್ಲ ತೃತಿಯಾ
೩) ರಾಮನವಮಿ -- ಶುಕ್ಲ ನವಮಿ
೪) ಏಕಾದಶಿ
೫) ಹನುಮ ಜಯಂತಿ -- ಹುಣ್ಣಿಮೆ -- ದವನದ ಹುಣ್ಣಿಮೆ.